1879-1954. ರಂಗಭೂಮಿಯ ಸುಪ್ರಸಿದ್ಧ ನಟ, ನಾಟಕಕಾರ, ರಂಗನಿರ್ಮಾಪಕ, ಗರೂಡ ಎಂಬುದು ಮನೆತನದ ಹೆಸರು. ತಂದೆ ಕೊಪ್ಪಳದ ಗುರುನಾಥ ಶಾಸ್ತ್ರಿಗಳು. ಎಳೆತನದಲ್ಲಿ ತಾಯಿಯನ್ನು ಕಳೆದುಕೊಂಡ ಇವರು ಕಲಬುರ್ಗಿಯಲ್ಲಿ ಸೋದರ ಮಾವನ ಮನೆಯಲ್ಲಿ ಬೆಳೆದರು. ಮೊದಲಿನಿಂದ ಸಂಗೀತ ಸಾಹಿತ್ಯ ಗಳ ಕಡೆ ಒಲವಿದ್ದ ಇವರು ಕನ್ನಡ ನಾಟಕ ಮಂಡಳಿಯ ಸತ್ಯ ಹರಿಶ್ಚಂದ್ರ ನಾಟಕ ನೋಡಿದಾಗ, ಹೆಚ್ಚು ಸಂಸ್ಕಾರಗೊಂಡಿದ್ದ ಅಂದಿನ ಮರಾಠೀ ನಾಟಕಗಳೊಂದಿಗೆ ಆ ಕನ್ನಡ ನಾಟಕವನ್ನು ಹೋಲಿಸಿ ಹೀಯಾಳಿಸಿದ ಗೆಳೆಯರ ಮೇಲೆ ಹುರುಡು ಗಟ್ಟಿ, ಪರಿಷ್ಕಾರಗೊಂಡ ಕನ್ನಡ ನಾಟಕವನ್ನು ರಚಿಸಿ ಪ್ರಯೋಗಿಸುವುದಾಗಿ ಪಣ ತೊಟ್ಟು, ಮಾರ್ಕಂಡೇಯ ಎಂಬ ತಮ್ಮ ಮೊದಲ ನಾಟಕವನ್ನು ಬರೆದು, ಶಿವ ಪ್ರಾಸಾದಿಕ ನಾಟಕ ಮಂಡಳಿ ಯನ್ನು ಕಟ್ಟಿ ಪ್ರಯೋಗಿಸಿ ಕಲ್ಬುರ್ಗಿ ಯ ಪ್ರೇಕ್ಷಕರನ್ನು ಮೆಚ್ಚಿಸಿದರು (1894). ಎರಡನೆಯ ನಾಟಕ ಬಂಧವಿಮೋಚನೆ. ಮುಂದೆ ಹನ್ನೆರಡು ವರ್ಷಗಳ ಕಾಲ ನಾಟಕಕಾರರಾಗಿ, ನಾಟ್ಯಶಿಕ್ಷಕರಾಗಿ ಕಲ್ಬುರ್ಗಿ, ಹೊಂಬಳ, ಕೊಪ್ಪಳ, ಬಿಜಾಪುರ, ಧಾರವಾಡಗಳ ಹಲವಾರು ನಾಟಕ ಸಂಸ್ಥೆಗಳಲ್ಲಿ ದುಡಿದರು.

ಕೊಣ್ಣೂರು ನಾಟಕ ಮಂಡಳಿಯ ವ್ಯವಸ್ಥಾಪಕ ಶಿವಮೂರ್ತಿಸ್ವಾಮಿ ಕಣಬರಗೀಮಠ ಅವರ ನೆರವಿನಿಂದ 1919ರಲ್ಲಿ ಗರೂಡರು ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಳಿಯನ್ನು ಕಟ್ಟಿದರು. ತಾವೇ ರಂಗನಾಟಕಗಳನ್ನು ರಚಿಸಿ, ಕಲಾವಿದರನ್ನು ಹುಡುಕಿ, ಆರಿಸಿ ಕರೆತಂದು, ನಿಷ್ಕೃಷ್ಟವಾದ ಶಿಕ್ಷಣ ಕೊಟ್ಟು ಸಾರ್ಥಕ ಪ್ರಯೋಗಗಳನ್ನು ಮಾಡಿದರು. ಮುಂದಿನ ಮೂರು ದಶಕಗಳಲ್ಲಿ ದತ್ತಾತ್ರೇಯ ಮಂಡಳಿ ಕನ್ನಡ ನಾಡಿನ ಎಲ್ಲ ಮುಖ್ಯಪಟ್ಟಣಗಳಲ್ಲಿ ನಾಟಕಗಳನ್ನು ಆಡಿದು ದಲ್ಲದೆ, ಮಹಾರಾಷ್ಟ್ರದ ಪುಣೆ, ಸಾಂಗಲಿ, ಕೊಲ್ಲಾಪುರಗಳಲ್ಲಿ ಪ್ರವಾಸ ಮಾಡಿ ಯಶಸ್ಸನ್ನು ಗಳಿಸಿತು. ಮನೋಜ್ಞವಾದ ಅಬಿsನಯ ಕಲೆ ಹಾಗೂ ಶುದ್ಧ ಸಾಹಿತ್ಯಕ ನಾಟಕಗಳಿಂದಾಗಿ ಅತ್ಯಂತ ಪ್ರಸಿದ್ಧಿಗೆ ಬಂತು. ಗರೂಡರು ಒಟ್ಟಾರೆ ಐವತ್ತನಾಲ್ಕು ರಂಗನಾಟಕಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಚೌತಿಯ ಚಂದ್ರ, ವತ್ಸಲಾಹರಣ, ಶಕ್ತಿವಿಲಾಸ, ಪಾದುಕಾಪಟ್ಟಾಬಿsಷೇಕಗಳಂಥ ಪೌರಾಣಿಕ ನಾಟಕಗಳೂ ಎಚ್ಚಮನಾಯಕನಂಥ ಐತಿಹಾಸಿಕನಾಟಕವೂ ವಿವೇಕವಿಜಯ, ಬಲ ಸಿಂಹತಾರಾದಂಥ ಕಾಲ್ಪನಿಕ ಕಥಾವಸ್ತುವನ್ನು ಆಧರಿಸಿದ ನಾಟಕಗಳೂ ವಿಷಮ ವಿವಾಹ, ಉಗ್ರ ಕಲ್ಯಾಣ  ದಂಥ ಸಾಮಾಜಿಕ ನಾಟಕಗಳೂ ಮಹಾತ್ಮಾ ಕಬೀರ ಮೊದಲಾಗಿ ಸಂತ ಜೀವನ ದರ್ಶನವನ್ನು ಪ್ರತಿಬಿಂಬಿಸಿದ ನಾಟಕಗಳೂ ಇವೆ. ಇವು ವೈಯಕ್ತಿಕವಾಗಿ ಗರೂಡರಿಗೆ ಅಪಾರವಾದ ಕೀರ್ತಿಯನ್ನೂ ಇವರ ಮಂಡಳಿಗೆ ಯಶಸ್ಸನ್ನೂ ತಂದುಕೊಟ್ಟವು.

ಇವರು ಹುಟ್ಟು ನಟರು. ಅಭಿನಯಕಲೆಯನ್ನೂ ಧ್ವನಿ ಬಳಕೆಯನ್ನೂ ಅವಿರತವಾಗಿ ಅಭ್ಯಸಿಸಿ ಆ ಕಲೆಗಳಿಗೆ ಶಾಸ್ತ್ರದ ಮಹತ್ತ್ವವನ್ನು ಕೊಟ್ಟವರು. ಅಶೋಕ, ದಶರಥ, ಎಚ್ಚಮನಾಯಕ, ಕಬೀರದಾಸ ಮೊದಲಾಗಿ ಇವರು ಅಬಿsನಯಿಸಿದ ಭೂಮಿಕೆಗಳು ಅಭಿನಯಕೇಸರಿ, ಕರ್ಣಾಟಕ ನಾಟಕಾಲಂಕಾರ ಎಂಬ ಪ್ರಶಸ್ತಿಗಳನ್ನು ಇವರಿಗೆ ಗಳಿಸಿಕೊಟ್ಟವು.

ಇವರ ನಾಟಕಗಳಲ್ಲಿ, ಪ್ರದರ್ಶನಗಳಲ್ಲಿ, ಸಂಗೀತಕ್ಕಿಂತ ಹೆಚ್ಚಾಗಿ ಅಬಿsನಯಕ್ಕೆ ಪ್ರಾಧಾನ್ಯ. ರಾಷ್ಟ್ರಪ್ರೇಮ ಹಾಗೂ ಭಾರತೀಯ ಸಂಸ್ಕೃತಿಯ ಉದಾತ್ತತೆಯ ಸೆಳಕುಗಳು ಇವರ ನಾಟಕಗಳಲ್ಲಿ ಹಾಸುಹೊಕ್ಕಾಗಿದ್ದವು. ಎಂದೇ ಅಂದಿನ ವಿಮರ್ಶಕರ ಕಣ್ಣಿನಲ್ಲಿ ಗರೂಡರು ನಟರಾಗಿ, ನಾಟಕಕಾರರಾಗಿ, ದೇಶಸೇವಕರಾಗಿ, ಧರ್ಮಪ್ರಸಾರಕರಾಗಿ ಕನ್ನಡ ರಂಗಭೂಮಿಗೆ ದೇಗುಲದ ಪಾವಿತ್ರ್ಯವನ್ನು ತಂದುಕೊಟ್ಟ ದ್ರಷ್ಟಾರರಾದರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ